ಯಾದಗಿರಿ
ಗುಲ್ಬರ್ಗ ಜಿಲ್ಲೆಯ ಯಾದಗಿರಿ ಉಪವಿಭಾಗದ ಒಂದು ತಾಲ್ಲೂಕು, ಪಟ್ಟಣ ಹಾಗೂ ಆಡಳಿತ ಕೇಂದ್ರ.  ಈ ತಾಲ್ಲೂಕಿನ ವಾಯುವ್ಯ ಮತ್ತು ಉತ್ತರದಲ್ಲಿ ಚಿತ್ತಾಪುರ, ಸೇಡಂ ತಾಲ್ಲೂಕುಗಳು ಪಶ್ಚಿಮದಲ್ಲಿ ಶಾಹಪುರ ತಾಲ್ಲೂಕೂ ದಕ್ಷಿಣ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶವೂ ಸುತ್ತುವರಿದಿದೆ.  ಬಳಚಕ್ಕರ್, ಹತ್ತಿಕುಣಿ, ಸಯ್ದಾಪುರ, ಯಾದಗಿರಿ, ಕೊಂಕಲ್ ಮತ್ತು ಗುರುಮಠ ಕಲ್ಲು ಹೋಬಳಿಗಳಿದ್ದು ಒಟ್ಟು 142 ಗ್ರಾಮಗಳಿವೆ.  ವಿಸ್ತೀರ್ಣ 1710.8 ಚ.ಕಿ.ಮೀ. ಈ ತಾಲ್ಲೂಕಿನ ಜನಸಂಖ್ಯೆ 3,25,780 (2001).

    ಈ ತಾಲ್ಲೂಕು ಗುಡ್ಡಗಾಡು ಪ್ರದೇಶ.  ತಾಲ್ಲೂಕಿನ ಉತ್ತರ ಭಾಗದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 32 ಕಿಮೀ ಉದ್ದದ ಬೆಟ್ಟಸಾಲಿದ್ದು ಅದು ಮುಂದೆ ಸೇಡಂ ತಾಲ್ಲೂಕನ್ನು ಪ್ರವೇಶಿಸುವುದು.  ಉಳಿದ ದಕ್ಷಿಣ ಭಾಗ ಸಣ್ಣ ಪುಟ್ಟ ಗುಡ್ಡಗಳಿರುವ ಪ್ರದೇಶ.  ಇಲ್ಲಿನ ಶಿಲಾರಚನೆ ಧಾರವಾಡ ಶಿಲಾರಚನೆಯೊಂದಿಗೆ ಹೋಲುವುದು.  ಶುದ್ಧ ಬೆಣಚುಕಲ್ಲು, ಮರಳು, ಪ್ರಶಸ್ತ ಶಿಲೆ ಮತ್ತು ಬಳಪದ ಕಲ್ಲು ಈ ತಾಲ್ಲೂಕಿನಲ್ಲಿ ದೊರೆಯುವುವು.  ತಾಲ್ಲೂಕಿನ ಮುಖ್ಯ ನದಿ ಭೀಮಾ (ನೋಡಿ- ಭೀಮಾ).  ಇದು ತಾಲ್ಲೂಕಿನ ಪಶ್ಚಿಮದಲ್ಲಿ ದಕ್ಷಿಣಾಭಿಮುಖವಾಗಿ ತಾಲ್ಲೂಕಿನ ಗಡಿಯಾಗಿ ಹರಿದು ಶಾಹಪುರ ತಾಲ್ಲೂಕನ್ನು ಬೇರ್ಪಡಿಸಿದೆ.  ನದಿ ಉದ್ದಕ್ಕೂ ಅದರ ಇಕ್ಕೆಲಗಳಲ್ಲಿ ಹತ್ತಿ ಬೆಳೆಯ ಉತ್ತಮವಾದ ಕಪ್ಪುಮಣ್ಣಿನ ಭೂಮಿ ಇದ್ದು ಮಧ್ಯೆ ಮರಳು ಮಿಶ್ರಿತ ಕಪ್ಪು ಮಣ್ಣಿನ ಭೂಮಿ ಕಾಣಬುರುವುದು.

   	ಹೆಚ್ಚು ಉಷ್ಣದಿಂದ ಕೂಡಿರುವ ಏಪ್ರಿಲ್, ಮೇ, ಜೂನ, ತಿಂಗಳುಗಳಲ್ಲಿ ಬಿಟ್ಟರೆ ಉಳಿದ ಕಾಲಗಳಲ್ಲಿ ವಾಯುಗುಣ ಹಿತಕರವೆನ್ನಬಹುದು.  ವಾರ್ಷಿಕ ಮಳೆ 828.93 ಮಿಮೀ.

	ಈ ತಾಲ್ಲೂಕಿನಲ್ಲಿ 2,572 ಹೆಕ್ಟೇರು (1964-65) ಅರಣ್ಯ ಪ್ರದೇಶವಿತ್ತು.  ಈ ಅರಣ್ಯ ಶುಷ್ಕ ಉಷ್ಣವಲಯ ಪ್ರದೇಶವಾಗಿದ್ದು  ಮುಳ್ಳುಕಂಟಿಗಳಿಂದ ಕೂಡಿದೆ.  ಇಲ್ಲಿನ ಅರಣ್ಯದಲ್ಲಿ ಹುರಗಲುಮರ, ಕೆಂಪುಜಾಲಿ, ಶ್ರೀಗಂಧ, ಹೊನ್ನೆ, ಕರೀಜಾಲಿ ಮುಂತಾದ ಮರಗಳು ಬೆಳೆಯುತ್ತವೆ.

	ತಾಲ್ಲೂಕಿನಲ್ಲಿ ಭೀಮಾನದಿಯ ಎಡದಂಡೆಯುದ್ದಕ್ಕೂ ವ್ಯವಸಾಯಕ್ಕೆ ನೀರಿನಾಶ್ರಯವಿದೆ.  ಹತ್ತಿಕುಣಿ ತೊರೆ ಜಲಸಂಗ್ರಹದಿಂದ ಈ ತಾಲ್ಲೂಕಿನ ಬೇಸಾಯಕ್ಕೆ ನೀರೊದಗುತ್ತಿದೆ.  ತಾಲ್ಲೂಕಿನಲ್ಲಿ ಜೋಳ, ಸಜ್ಜೆ, ರಾಗಿ, ಗೋದಿ, ತೈಲ ಬೀಜಗಳು, ದ್ವಿದಳಧಾನ್ಯಗಳು, ಬತ್ತ, ಮೆಣಸಿನಕಾಯಿ, ಹತ್ತಿ, ಮತ್ತು ಹೊಗೆ ಸೊಪ್ಪನ್ನು ಬೆಳೆಯುವರು.  ತಾಲ್ಲೂಕಿನಲ್ಲಿ ಮಾವು, ಬಾಳೆ, ದ್ರಾಕ್ಷಿ ಮುಂತಾದ ಫಲವನ್ನೂ ಆಲೂಗೆಡ್ಡೆ, ಈರುಳ್ಳಿ ಮತ್ತು ವಿವಿಧ ತರಕಾರಿಗಳನ್ನೂ ಬೆಳೆಯುವರು.  ಪಶುಸಂಗೋಪನೆಯುಂಟು.  ಭೀಮಾನದಿಯ ದಂಡೆಗುಂಟ ಸ್ವಲ್ಪ ಮಟ್ಟಿನ ಮತ್ಸಯೋದ್ಯಮವಿದೆ.

   	ತಾಲ್ಲೂಕಿನಲ್ಲಿ ಬೀಡಿ ತಯಾರಿಕೆ ಮತ್ತು ಇತರ ಗೃಹ ಕೈಗಾರಿಕೆಗಳಿವೆ.  ಇಲ್ಲಿರುವ ಗ್ರಾಮಾಂತರ ಕುಶಲ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಬ್ಬಿಣ ಮತ್ತು ಮರಗೆಲಸ, ಬಟ್ಟೆ ಹೊಲಿಯುವುದು, ಉಣ್ಣೆಬಟ್ಟೆ ಮತ್ತು ಚರ್ಮವಸ್ತು ತಯಾರಿಕೆಗಳಲ್ಲಿ ಹಾಗೂ ನೇಯುವುದರಲ್ಲಿ ತರಬೇತಿ ಕೊಡಲಾಗುತ್ತದೆ.  ಶೇಂಗಾ, ಬೀಡಿ, ಬೇವಿನ ಎಣ್ಣೆ ಇವು ತಾಲ್ಲೂಕಿನ ಮುಖ್ಯ ಆರ್ಥಿಕ ಉತ್ಪಾದನೆ ಮತ್ತು ತಯಾರಿಕೆ.  ತಾಲ್ಲೂಕಿನಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿದ್ದು ಆರ್ಥಿಕ ನೆರವು ನೀಡುತ್ತಿವೆ.  ತಾಲ್ಲೂಕಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿವೆ.  ಆಸ್ಪತ್ರೆ, ಅಂಚೆ ದೂರವಾಣಿ ಮತ್ತು ವಿದ್ಯುತ್ ಸೌಲಭ್ಯಗಳಿವೆ.  

	ಈ ತಾಲ್ಲೂಕಿನ ಪಶ್ಚಿಮದ ಅಂಚಿನಲ್ಲಿ ರಾಯಚೂರು-ಗುಲ್ಬರ್ಗ ರೈಲುಮಾರ್ಗ ಹಾದುಹೋಗಿದೆ.  ತಾಲ್ಲೂಕಿಗೆ ಜಿಲ್ಲೆಯ ಮುಖ್ಯ ರಸ್ತೆಗಳ ಸಂಪರ್ಕವಿದೆ.

	ಈ ತಾಲ್ಲೂಕಿನ ಮುಖ್ಯ ಗ್ರಾಮಗಳಲ್ಲಿ ಹತ್ತಿಕುಣಿ ಒಂದು.  ಯಾದಗಿರಿಯ ಉತ್ತರಕ್ಕೆ 11 ಕಿಮೀ ದೂರದಲ್ಲಿರುವ ಈ ಗ್ರಾಮದ ಬಳಿ ಹತ್ತಿಕುಣಿ ತೊರೆಗೆ ಕಟ್ಟಿರುವ ಕಟ್ಟೆಯಿಂದ ಇದು ಪ್ರಸಿದ್ಧವಾಗಿದೆ.  ಇಲ್ಲಿ ಭೀಮಾನದಿ ಕೃಷ್ಣನದಿಯನ್ನು ಕೂಡುವ ಸಂಗಮ ಒಂದು ಪವಿತ್ರ ಕ್ಷೇತ್ರ.  ಇಲ್ಲಿಯ ಚೆನ್ನವೀರ ಬಸವೇಶ್ವರ ಜಾತ್ರೆ ಪ್ರಸಿದ್ಧವಾದುದು.

	ಯಾದಗಿರಿ ಈ ತಾಲ್ಲೂಕಿನ ಆಡಳಿತ ಕೇಂದ್ರ  ಭೀಮಾನದಿಯ ಎಡದಂಡೆಯ ಸನಿಹದಲ್ಲಿ, ಗುಲ್ಬರ್ಗದ ಆಗ್ನೇಯಕ್ಕೆ 124 ಕಿಮೀ ದೂರದಲ್ಲೂ ಬೆಂಗಳೂರಿನ ಉತ್ತರಕ್ಕೆ 570 ಕಿಮೀ ದೂರದಲ್ಲೂ ಇದೆ.  ಜನಸಂಖ್ಯೆ 58,802 (2001).

	ಪಟ್ಟಣ ಸಮುದ್ರ ಮಟ್ಟಕ್ಕೆ 360 ಮೀ ಎತ್ತರದಲ್ಲಿದ್ದು ಬೇಸಗೆ ಕಾಲ ಬಿಟ್ಟು ಉಳಿದ ಕಾಲಗಳಲ್ಲಿ ಹಿತಕರ ವಾಯುಗುಣ ಹೊಂದಿದೆ.  ರಾಯಚೂರು-ಗುಲ್ಬರ್ಗ ರೈಲುಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣವಾಗಿದ್ದು ಜೊತೆಗೆ ಜಿಲ್ಲಾ ಹೆದ್ದಾರಿಗಳ ಕೂಡು ಸ್ಥಳದಲ್ಲಿರುವ ಈ ಪಟ್ಟಣ ಒಂದು ಮುಖ್ಯ ವ್ಯಾಪಾರ ಕೇಂದ್ರ.  ಇಲ್ಲಿ ಶಾಲಾ ಕಾಲೇಜುಗಳೂ ಆಸ್ಪತ್ರೆಗಳೂ ಇದ್ದು ಅಂಚೆ, ವಿದ್ಯುತ್ ಮುಂತಾದ ಸೌಲಭ್ಯಗಳಿವೆ.  ಪಟ್ಟಣದ ಹತ್ತಿರವಿರುವ ಬೆಟ್ಟದ ಮೇಲೆ ಯಾದವ ದೊರೆಗಳ ಕಾಲದ ಒಂದು ಕೋಟೆಯಿದೆ.  ಜಾಮಾ ಮಸೀದಿ ಇದೆ.  ಪ್ರಸಿದ್ಧ ಮೈಲಾರಲಿಂಗ ದೇವಾಲಯವಿದೆ.  ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುವುದು.
	(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ